1942-. ಕನ್ನಡದ ಹೆಸರಾಂತ ದಲಿತ ಲೇಖಕಿ. ಇವರು ಗುಲ್ಬರ್ಗ ಜಿಲ್ಲೆ ಸಾವಳಗಿ ಗ್ರಾಮದಲ್ಲಿ 1942 ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ, ತಾಯಿ ಶರಣಮ್ಮ. ಬಿ.ಎಡ್. ಹಾಗೂ ಕನ್ನಡ ಎಂ.ಎ. ಪದವಿ ಪಡೆದು ಅಧ್ಯಾಪಕಿಯಾಗಿ, ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ 35ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಇವರು 26 ಕಾದಂಬರಿ ಗಳನ್ನೂ 5 ನಾಟಕಗಳನ್ನೂ 2 ಕಥಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ತಾವರೆಯ ಹೂ ಇವರ ಮೊದಲ ಕಾದಂಬರಿ (1968). ಚಂದನದಚಿಗುರು(1969), ಸಪ್ತವರ್ಣದ ಸ್ವಪ್ನ (1973), ಪ್ರೀತಿಸಿದ್ದು ನಿನ್ನನ್ನೇ (1986), ನಿನ್ನ ತೋಳುಗಳಲ್ಲಿ (1987), ನನ್ನ ನಿನ್ನ ನಡುವೆ (1992), ಆಸರೆಗಳು (1996), ಅಭಿಮಾನ (1998) - ಈ ಕೃತಿಗಳು ಮಧ್ಯಮ ವರ್ಗದ ಬದುಕಿನ ಪ್ರೀತಿ, ಪ್ರಣಯ ಮತ್ತು ಕೌಟುಂಬಿಕ ಸಮಸ್ಯೆಗಳ ಸುತ್ತ ಹೆಣೆದ ಜನಪ್ರಿಯ ಸ್ವರೂಪದ ಕಾದಂಬರಿಗಳು. ಹಸಿ ಮಾಂಸ ಮತ್ತು ಹದ್ದುಗಳು (1978), ಮಾಪುರ, ತಾಯಿಯ ಮಕ್ಕಳು (1978), ಆಘಾತ (1980), ಚಿಕ್ಕಿಯ ಹರೆಯದ ದಿನಗಳು (1983), ನೀಲಗಂಗಾ (1986), ದುಮ್ಮಸು (1994), ದಂಗೆ (1997), ಬದುಕು (2001) - ಈ ಕಾದಂಬರಿಗಳಲ್ಲಿ ಸ್ತ್ರೀಪ್ರಪಂಚದ ದುರಂತ ಚಿತ್ರಗಳಿವೆ. ಜಾತಿವ್ಯವಸ್ಥೆಯ ಅಮಾನವೀಯ ಆಚರಣೆಗಳಿಂದ ಅಪಮಾನಿತರಾದ ದಲಿತವರ್ಗದ ತಾಪತಲ್ಲಣಗಳನ್ನೂ ಬಡತನ, ಮೌಢ್ಯ, ಲೈಂಗಿಕ ಹಿಂಸೆಗಳಿಂದ ನೊಂದ ಶೋಷಿತ ಸ್ತ್ರೀಯರ ಸಂಕಟ ಸಮಸ್ಯೆಗಳನ್ನೂ ಅವುಗಳಲ್ಲಿ ಸೂಕ್ಷ್ಮತೆ ಭಾವತೀವ್ರತೆಯೊಂದಿಗೆ ಕಲಾತ್ಮಕವಾಗಿ ಅನಾವರಣ ಗೊಳಿಸಿದೆ. ಅಪೂರ್ವ ಸೃಜನ ಶೀಲತೆ, ಸಾಮಾಜಿಕ ಕಾಳಜಿ ಇವರ ಕಥೆ ಕಾದಂಬರಿಗಳ ಅನನ್ಯತೆ. ದಲಿತಸಂವೇದನೆ, ಸ್ತ್ರೀಪರತೆ, ಪ್ರತಿಭಟನೆ ಮತ್ತು ಪರಿಷ್ಕಾರದ ಆಶಯಗಳು ಇವರ ಕೃತಿಗಳ ಜೀವಪರ ನೆಲೆೆಯನ್ನು ಗಟ್ಟಿಗೊಳಿಸಿವೆ. 

ಜ್ವಲಂತ (1989), ಅವ್ವ ಮತ್ತು ಇತರ ಕಥೆಗಳು (1993) ಇವು ಕಥಾ ಸಂಕಲನಗಳು. ಜೋಗಿಣಿ ಎಂಬುದು ಕೆಳವರ್ಗದ ಮಹಿಳೆಯರ ಲೈಂಗಿಕ ಶೋಷಣೆಯ ಸುತ್ತ ಹೆಣೆದ ನಾಟಕ. ಅವ್ವ, ಸತ್ತ ಹೆಣ್ಣಿನ ಸುತ್ತ, ಜೀವನಚಕ್ರ, ನೀಲಗಂಗಾ - ಇವು ಮುಗ್ಧ ಗ್ರಾಮೀಣ ಮಹಿಳೆಯರ ಭಾವನಾತ್ಮಕ ಸಂಘರ್ಷಗಳನ್ನೂ ಅವರ ಜ್ವಲಂತ ಸಮಸ್ಯೆಗಳನ್ನೂ ಬಿಂಬಿಸುವ ಇತರ ನಾಟಕಗಳು.

ಅಲೆಮಾರಿ ಜನಾಂಗವಾದ ದುರಗ ಮುರಗಿಯವರನ್ನು ಕುರಿತಂತೆ ಇವರು ಸಂಶೋಧನೆ ನಡೆಸಿ ದುರಗ ಮುರಗಿಯವರ ಸಂಸ್ಕೃತಿ (1993) ಎಂಬ  ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಖೇಮಣ್ಣ (1998) ಇವರ ಒಂದು ಸಂಪಾದಿತ ಕೃತಿ.

ಇವರ ಹಸಿ ಮಾಂಸ ಮತ್ತು ಹದ್ದುಗಳು ಕಾದಂಬರಿಗಳು ಮರಾಠಿಗೆ ಅನುವಾದಗೊಂಡಿವೆ. ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಕನ್ನಡದಲ್ಲಿ ಚಲನಚಿತ್ರವಾಗಿವೆ. ಇವರ ಅನೇಕ ಕಥೆಗಳು ತೆಲುಗು  ಮತ್ತು ತಮಿಳಿಗೆ ಭಾಷಾಂತರಗೊಂಡಿವೆ.

ಇವರ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿಗಳು ದೊರಕಿವೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಬಿ.ಸರೋಜಾದೇವಿ ಪ್ರಶಸ್ತಿ, ಗುಲ್ಬರ್ಗದ ಎಸ್.ಆರ್. ಪಾಟೀಲ ಪ್ರತಿಷ್ಠಾನದ ಕಾಯಕರತ್ನ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಗೌರವ ಪ್ರಶಸ್ತಿ (1995), ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ (1998) ಮತ್ತು ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ (2002) ಇವರಿಗೆ ಲಭ್ಯವಾಗಿವೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಗೌರವಕ್ಕೆ ಇವರು ಪಾತ್ರರಾಗಿದ್ದಾರೆ (2004). ಇವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಲಭಿಸಿದೆ (2004). ಇವರು ಈಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾರೆ (2005).	     

ನಾಡೋಜ ಪದವಿ ಪಡೆದ ಪ್ರಥಮ ಮಹಿಳೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷಳಾದ ಪ್ರಥಮ ಮಹಿಳೆ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ಕರ್ನಾಟಕದ ಪ್ರಥಮ ಮಹಿಳೆ. ಹೀಗೆ ಹಲವಾರು ಪ್ರಥಮಗಳನ್ನು ತಮ್ಮದಾಗಿಸಿಕೊಂಡು ವಿಶಿಷ್ಟ ವ್ಯಕ್ತಿತ್ವ ಇವರದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ